1. ಶಿಕ್ಷಕರೆಂಬ ಭಯ ಮಕ್ಕಳಿಗಿಲ್ಲದಿರಲಿ, ಮಕ್ಕಳನ್ನು ತಮ್ಮ ಮಗುವೆಂಬಂತೆ ಕಾಣುವ ಮನೋಭಾವಗುರುಗಳಲ್ಲಿರಲಿ.

2. ವಿಶೇಷ ಅವಶ್ಯಕತೆಯುಳ್ಳ ಮಕ್ಕಳ ಕಲಿಕೆಗೆ ಅಗತ್ಯವಾದ ಭೌತಿಕ-ಶೈಕ್ಷಣಿಕ ವಾತಾವರಣ ಇರಲಿ ಮತ್ತು ಅದು ಮಕ್ಕಳಿಗೆ ಮುಕ್ತವಾಗಿರಲಿ.

3. ಮಕ್ಕಳ ಎಲ್ಲಾ ಪ್ರತಿಭೆಗಳಿಗೆ ಅವಕಾಶವಿರಲಿ, ಎಲ್ಲಾ ಮಕ್ಕಳು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತಿರಲಿ.

4. ಮಕ್ಕಳ ಹಕ್ಕುಗಳನ್ನು ಗೌರವಿಸುವ ಪ್ರವೃತ್ತಿ ಎಲ್ಲರಲ್ಲಿರಲಿ.

5. ಮಕ್ಕಳ ನಾಯಕತ್ವ ಶಕ್ತಿಯ ಬಲವರ್ಧನೆಗೆ ವಿಷಯವಾರು ಸಂಘಗಳಿದ್ದು ಮಕ್ಕಳೇ ಅದನ್ನು ಸಂಘಟಿಸುವಂತಿರಲಿ- ಮಾರ್ಗದರ್ಶನ ಶಿಕ್ಷಕರಾಗಿದ್ದಿರಲಿ.

6. ಅವಕಾಶವಿದ್ದಲ್ಲಿ ಕೈತೋಟ,ನೆಡುತೋಪುಗಳಿಂದ ಪರಿಸರವು ಸುಂದರವೂ ತಂಪೂ ಆಗಿರಲಿ. ಅವುಗಳಿಂದ ಆದಾಯವಿದ್ದಲ್ಲಿ ಅದನ್ನು ಉಪಕರಣಗಳನ್ನು ಕೊಳ್ಳಲು ಬಳಸಿ.

7. ಪುಸ್ತಕ ಪ್ರೀತಿಯನ್ನು ಬೆಳೆಸುವ ಶಾಲಾಗ್ರಂಥಾಲಯ ಮಕ್ಕಳಿಗೆ ಮುಕ್ತವಾಗಿರಲಿ. ಪುಸ್ತಕ ಇರುವುದು ಬಳಸಲಿಕ್ಕಾಗಿಯೇ ಅಲ್ಲವೇ? ಯಾರೂ ಅವು ಹೊಸತಾಗಿಯೇ ಇರಬೇಕೆಂದು ಬಯಸುವುದಿಲ್ಲ.

8. ಕೇವಲ ಬೋಧನೆಗಿಂತ ಚಟುವಟಿಕೆ ಆಧರಿತ ಕಲಿಸುವಿಕೆ ಇರಲಿ.

9. ಶುಚಿತ್ವದ ಪಾಠ, ತಿಳುವಳಿಕೆ, ಅನುಷ್ಠಾನ, ಶಾಲೆಯಲ್ಲಿ ಆರಂಭವಾಗಿ, ಮನೆಗಳಲ್ಲಿ ಬೆಳೆದು ಇಡೀ ಗ್ರಾಮಕ್ಕೆ ಪಸರಿಸಲಿ.

10. ಭಾಷಾಬೋಧನೆ ಅಭಿನಯದಿಂದ ಕೂಡಿರಲಿ.

11. ಶಾಲೆಯ ಚಟುವಟಿಕೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹಿತವಾಗಿರಲಿ.

12. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವ ಅವಕಾಶ ಇರಲಿ.

ಕಲಿಕೆ-ಕಲಿಸುವಿಕೆಯ ನೂರಾರು ಆದರ್ಶಗಳಲ್ಲಿ ಮೇಲಿನವು ಕೇವಲ ಕೆಲವು. ಶಿಕ್ಷಕರ ಪ್ರತಿಭೆಗೆ ದಾರಿಗಳು ಹಲವು ಇವೆ. ಮುಖ್ಯವಾಗಿ ಬೇರೆ ಬೇರೆ ಪರಿಸರದಿಂದ ಬರುವ ಮಕ್ಕಳೆಲ್ಲಾ ’ಒಂದು’ ಎಂದೂ ಸಾಧುವಾಗದು.

ಮೊದಲು ಮನಸ್ಸು ಬೇಕು. ಮತ್ತೆ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ.