ವ್ಯಾಕರಣವೆಂದರೆ ನೀರಸ, ಶುಷ್ಕ. ಇದರಲ್ಲಿ ಬರುವ ಕೆಲವು ನಿಯಮಗಳು ಮತ್ತು ಪಾರಿಭಾಷಿಕ ಪದಗಳಿಂದಾಗಿ ಅದೊಂದು ಕಬ್ಬಿಣದ ಕಡಲೆ; ಜೀರ್ಣಿಸಿಕೊಳ್ಳಲು ಆಗದು ಎಂಬ ಭಯವನ್ನು ಹುಟ್ಟಿಸಿದೆ ಹಾಗೂ ವ್ಯಾಕರಣವನ್ನು ವ್ಯಾಕರಣವೆಂದು ಪ್ರತ್ಯೇಕವಾಗಿ ಕಲಿಸುವ ಶಿಕ್ಷಕರು ಭಾಷೆಯೊಂದಿಗೆ ಅದು ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದರಿಯದೆ ಇನ್ನಷ್ಟು ಕಷ್ಟಗೊಳಿಸುವ ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಾರೆ.

ವ್ಯಾಕರಣ ಎಂದರೆ ಭಾಷೆಯನ್ನು ಖಚಿತಗೊಳಿಸುವ ನಿಯಮ. ರೂಢಿಯಲ್ಲಿರುವ ನಮ್ಮ ಭಾಷೆಯು ವ್ಯಾಕರಣಬದ್ಧವಾಗಿದೆ ; ಅಂದರೆ ಎಲ್ಲರೂ ಬಳಸುವ ನಿಯಮಗಳನ್ನು ನಾವೂ ಪಾಲಿಸಿ ಮಾತನಾಡುತ್ತೇವೆ. ನಮಗರಿವಿಲ್ಲದೆಯೇ ನಾವು ಸರಿಯಾಗಿ ಮಾತನಾಡುತ್ತೇವೆ. ನಮಗರಿವಿಲ್ಲದೆಯೇ ನಾವು ಸರಿಯಾಗಿ ಮಾತನಾಡಲು ಕಲಿತ್ತಿದ್ದೇವೆ. ಹಿರಿಯಾರುಡುವುದನ್ನು ಕೇಳಿ, ಅನುಕರಿಸಿ ನಾವು ಭಾಷೆಯನ್ನು ಕಲಿಯುತ್ತೇವೆ. ತಪ್ಪೂ, ಒಪ್ಪೂ ಎರಡೂ ಅದರೊಂದಿಗೆ ಸೇರಿಕೊಂಡಿರುತ್ತದೆ. ಅಂದರೆ, ನಾವಾಡುವ ಮಾತಲ್ಲಿ ಸಂಧಿ, ಸಮಾಸ, ನಾಮಪದ, ಕ್ರಿಯಾಪದ, ಅವ್ಯಯ, ವಿಶೇಷಣ ಮೊದಲಾದುವೆಲ್ಲವೂ ಉಂಟು. ಆದರೆ ಇದು ಸಮಾಸ, ಇದು ಅಬದ್ಧವಾಕ್ಯ, ಇದು ಗುಣವಚನ ಎಂಬುದು ಮಾತ್ರ ನಮಗೆ ತಿಳಿದಿರುವುದಿಲ್ಲ.. ತಿಳಿದುಕೊಳ್ಳುವ ಸಾಮರ್ಥ್ಯ ಬಂದ ಮೇಲೆ ಅದನ್ನು ಕಲಿಯುತ್ತೇವೆ.

ಸಮಾಜ ಮೊದಲು, ಅನಂತರ ಸಮಾಜ ಶಾಸ್ತ್ರ; ಹಣಕಾಸಿನ ವ್ಯವಹಾರ, ಲಾಭ, ನಷ್ಟ ಮೊದಲು ಅನಂತರ ಅರ್ಥಶಾಸ್ತ್ರ. ಹಾಗೆಯೇ ಮೊದಲು ಭಾಷೆ ಅನಂತರ ಅದನ್ನು ವ್ಯವಸ್ಥಿತವಾಗಿ ಬಂಧಿಸಿದ ವ್ಯಾಕರಣ ಶಾಸ್ತ್ರ. ನಮ್ಮ ಉಪಯೋಗವನ್ನು ಬಿಟ್ಟು ಸಮಾಜ ಶಾಸ್ತ್ರವೂ ಇಲ್ಲ, ಅರ್ಥಶಾಸ್ತ್ರವೂ ಇಲ್ಲ, ವ್ಯಾಕರಣವೂ ಇಲ್ಲ.

ನಮ್ಮ ಮಾತು ಶುದ್ಧವಾಗಿದೆಯೆಂದಾದ ಮೇಲೆ ವ್ಯಾಕರಣವೆಂದು ಭಯಭೀತರಾಗುವುದು ಅನಗತ್ಯ. ಮೇಲು ತರಗತಿಗೆ ಹೋಗುತ್ತಿರುವಂತೆ ಹೆಚ್ಚು ಹೆಚ್ಚು ಹೊಸ ಪದಗಳನ್ನು ಕಲಿಯುವಂತೆಯೆ ಈಗಾಗಲೇ ನಮ್ಮ ಮಾತಿನಲ್ಲಿ ತಲೆಹಾಕಿರುವ ನಿಯಮ, ವಾಕ್ಯರಚನಾಕ್ರಮ, ಪದಗಳ ಜೋಡಣೆಯ ಕ್ರಮಗಳನ್ನು, ಅವುಗಳಿಗೆ ಪ್ರತ್ಯೇಕ ಹೆಸರಿಟ್ಟು ಕಲಿಯುವುದೇ ಆಗಿದೆ. ನಮ್ಮ ಜ್ಞಾಪಕ ಶಕ್ತಿಯ ಮೇಲೆ ನಂಬಿಕೆ ಇಡೋಣ.

ಇದು ಸುಲಭವೂ ಹೌದು. ಉದಾಹರಣೆಗೆ ಸಂಧಿಗಳನ್ನೇ ಆಯ್ಕೆಮಾಡಿಕೊಳ್ಳೋಣ.

ನಮ್ಮ ಮಾತಿನಲ್ಲಿ ನೂರಾರು ಪದಗಳಿರುತ್ತವೆ. ಮಾತನಾಡಿದಂತೆಯೇ ಬರೆಯುತ್ತೇವೆ. ಕೆಲವು ಪದಗಳು ಇನ್ನೊಂದು ಪದವನ್ನೋ ಅದಕ್ಕೆ ಸೇರಿರುವ ಪ್ರತ್ಯಗಳನ್ನೋ ಬೆಸೆದುಕೊಂಡಿರುತ್ತದೆ. ಇನ್ನು ಕೆಲವು ಪ್ರತ್ಯೇಕವಾಗಿಯೇ ಇರುತ್ತದೆ. ಇಲ್ಲಿ ಅವುಗಳ ಸೇರುವಿಕೆಯು ಉಚ್ಚಾರಣೆಯ ಸುಖಕ್ಕಾಗಿ, ಸೌಲಭ್ಯಕ್ಕಾಗಿ, ಸಮಯದ ಉಳಿತಾಯಕ್ಕಾಗಿ ನಡೆಯುತ್ತದೆ. ಮನೆಯನ್ನು ಎಂಬ ಪದವನ್ನು ಮನೆ ಅನ್ನು ಎಂದು ಪ್ರತ್ಯೇಕವಾಗಿ ಇರಿಸಿ ಹೇಳುವುದೇ ಇಲ್ಲ. ಹೀಗೆ ಸೇರಿಕೊಡಿರುವುದನ್ನೆಲ್ಲ ಬಿಡಿಸಿ ಬಿಡಿಸಿ ಹೇಳಿದರೆ, ಬರೆದರೆ ಅಪಹಾಸ್ಯವಾದೀತು. ಅದಕ್ಕೆ ಈ ಪುಟ್ಟ ವಾಕ್ಯ ಸಾಕ್ಷಿ. “ ಆ ಊರು ಅ ಅಲ್ಲಿ ಮನೆ ಒಂದು ಅನ್ನು ಕಟ್ಟು ಇಸುದ" ಅಂದರೆ ಏನರ್ಥವಾದೀತು. “ಆ ಊರಲ್ಲಿ ಮನೆಯೊಂದನ್ನು ಕಟ್ಟಿಸಿದ" ಎಂದರೆ ಎಷ್ಟು ಸಲೀಸು.

ಊರಲ್ಲಿ, ಮನೆಯೊಂದನ್ನು ಎಂಬಲ್ಲಿಯ ಪದ ಪ್ರತ್ಯಯಗಳ ಸೇರಿಕೆಯಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಬಹುದು. ಊರು (ರ್ + ) = ಊರ್ + ಅಲ್ಲಿ. ಎರಡನೆಯ ಪದದಲ್ಲಿ ಮೊದಲ ಪದದ ಅಂತ್ಯದಲ್ಲಿರುವ "" ಕಾರ ಇಲ್ಲವಾದುದನ್ನು ತಿಳಿದುಕೊಳ್ಳಬಹುದು. ಹೀಗೆ ಪದಗಳೆರಡು ಸೇರುವಾಗ ಒಂದು ಸ್ವರಲೋಪವಾದರೆ ಅದು ಲೋಪಸಂಧಿ ಎಂಬ ಹೆಸರನ್ನು ಪಡೆಯುತ್ತದೆ. ಹೀಗೆಯೇ ಕೊನೆಗೊಂದು, ಊರೂರು, ಕಟ್ಟಿಟ್ಟ, ಒಳಗೋಡು, ಹಾಲಿಡು...ಇತ್ಯಾದಿ ಶಬ್ದಗಳು. ಅರ್ಥಕೆಡುವ ಸಂದರ್ಭದಲ್ಲಿ ಈ ಲೋಪವು (ಮುನಿ + ಇವನು = ಮುನಿವನು ಎಂದು) ಆಗದೆ ಮುನಿಯುವನು ಎಂದಾಗಿ ’"ಯ್" ಆಗಮವಾಗುತ್ತದೆ.

ಇದೇ ರೀತಿಯಾಗಿ ಮನೆ + ಒಂದನ್ನು ಎಂಬುದು ಮನೆಯೊಂದನ್ನು ಎಂದಾಗುತ್ತದೆ. ಬಿಡಿಸಿದರೆ ಮನೆ ಒಂದನ್ನು ಎಂದಾಗುತ್ತದೆ. ಇಲ್ಲಿ ಅದಕ್ಕೆ "ಯ್" ಎಂಬ ವ್ಯಂಜನವೊಂದು ಹೊಸತಾಗಿ ಬಂದು ಸೇರಿದೆ. ಬಂದು ಸೇರುವುದನ್ನು "ಆಗಮ" (ಆಗಮಿಸಿ ಒಳಗೆ) ಎಂಬ ಪದ ಸೂಚಿಸುವುದರಿಂದ ಇದು ಆಗಮ ಸಂಧಿ. “ಯ್" ನಂತಯೇ "ವ್" ಕೂಡ ಆಗಮಗೊಳ್ಳುವ ಅಕ್ಷರ. ಬೇರೆ ಯಾವ ಅಕ್ಷರಗಳೂ ಆಗಮಗೊಳ್ಳುವುದಿಲ್ಲ. ಕಡೆ(ಯ್)ಅಲ್ಲಿ, ನದಿಯಿಂದ, ಸಾಯದೆ, ನೋಯದೆ, ಮೇಯಿಸು ಇತ್ಯಾದಿಉದಾಹರಣೆಗಳನ್ನು ಗಮನಿಸಿದಾಗ ಸ್ವರಕ್ಕೆ ಸ್ವರಪರವಾದಾಗ ಅರ್ಥಕ್ಕೆಹಾನಿಬರುತ್ತದೆ ಎನ್ನುವಾಗ "ಯ್" ಆಗಮ ಮಾಡಿಕೊಂಡದನ್ನು ಗಮನಿಸಬಹುದು. ಎಲ್ಲಾ ಸ್ವರಗಳಿಗೆ ಸ್ವರಪರವಾದಾಗ ’"ಯ್" ಬರುವುದಿಲ್ಲ. , , , , , , ಓ ಗಳಿಗೆ ಸ್ವರಪರವಾದಾಗ ’ವ್’ಕಾರ ಆಗಮವಾಗುತ್ತದೆ. ಉದಾ. ಮನುವಿನ, ಹೂವಿನ, ಗೋವಿನ, ಇತ್ಯಾದಿ. ಇಲ್ಲಿ ಹೂವಿನ ಹಾಗು ಹೂಯಿನ ಎಂಬಲ್ಲಿಯ ಉಚ್ಚಾರ ವ್ಯತ್ಯಾಸಗಳನ್ನು ಗಮನಿಸಿದಾಗ ಮಾತನಾಡಲು ಯಾವುದು ಹಿತವೋ ಅದಕ್ಕನುಗುಣವಾದ ”"ಯ್, ವ್" ಗಳನ್ನು ಆಗಮ ಮಾಡಿಕೊಂಡಿದ್ದೇವೆ ಎನಿಸುತ್ತದೆ.

ಲೋಪ ಆಗಮಗಳಲ್ಲದೆ, ಪದಗಳನ್ನು ಸೇರಿಸುವಾಗ ಇನ್ನೂ ಒಂದು ಮಾರ್ಪಾಡು ನಮ್ಮ ಆಡುನುಡಿಯಲ್ಲಾದುದನ್ನು ಕಾಣಬಹುದು. ಇದು ವ್ಯಂಜನಾಕ್ಷರಕ್ಕೆ ಸಂಬಂಧ ಪಟ್ಟದ್ದರಿಂದ ಇದನ್ನು ವ್ಯಂಜನ ಸಂಧಿ ಎಂದು ಅನುಕೂಲಕ್ಕಾಗಿ ವಿಭಾಗಿಸಿಕೊಳ್ಳಲಾಗಿದೆ. (ಲೋಪ ಆಗಮಗಳೆರಡೂ ಸ್ವರಾಕ್ಷರದ ಸೇರಿಕೆಯ ಸಂಧಿಯಾದ್ದರಿಂದ ಸ್ವರಸಂಧಿಗಳಾಗಿವೆ)

ಹೊಸಗನ್ನಡ, ನಿಡುಗಾಲು, ಕೈಗೊಳ್ಳು;ಕಣ್ದೆರೆ, ಬೆಟ್ಟದಾವರೆ, ಹುಲಿದೊಗಲು, ಕಣ್ಬೊಲ, ಕಂಬನಿಗಳಲ್ಲಿ ಮೊದಲ ಮೂರು ಪದಗಳಲ್ಲಿ ’"ಕ್"ಕಾರದ ಸ್ಥಳದಲ್ಲಿ "ಗ್"ಕಾರವೂ ಮುಂದಿನ ಮೂರು ಪದಗಳಲ್ಲಿ "ತ್"ಕಾರದ ಎಡೆಯಲ್ಲಿ ದ್ ಕಾರವೂ ಕೊನೆಯ ಎರಡು ಉದಾಹರಣೆಗಳಲ್ಲಿ ಪ್ ಕಾರದ ಸ್ಥಳದಲ್ಲಿ ಬ್ ಕಾರವೂ ಬಂದಿದೆ.

ಇದನ್ನೇ ಒಂದು ನಿಯಮವನ್ನಾಗಿ ಮಾಡಿದ ಅದು ಹೀಗಾಗುತ್ತದೆ. “ಉತ್ತರ ಪದದ ಆದಿಯ ವರ್ಗದ ಮೊದಲ ಅಕ್ಷರಗಳಾದ ಕ್, ತ್, ಪ್, ಗಳಿಗೆ ಕ್ರಮವಾಗಿ ಅದೇ ವರ್ಗದ ಮೂರನೆಯ ಅಕ್ಷರವಾದ ಗ್, ದ್,ಬ್ ಗಳು ಆದೇಶವಾಗಿ ಬರುತ್ತವೆ. ಇದೇ ರೀತಿಯಾಗಿ ನಮ್ಮ ಮಾತಿನಲ್ಲಿ ಪ್, ಬ್, ಮ್, ಗಳಿಗೆ ’ವ್’ಕಾರವನ್ನು ಇಟ್ಟದ್ದೂ ಉಂಟು. ಮೇಲ್ + ಮಾತು = ಮೆಲ್ವಾತು, ಕಡು + ಬೆಳ್ಪು = ಕಡುವೆಳ್ಪು, ಎಳ + ಬಳ್ಳಿ = ಎಳವಳ್ಳಿ.

ಮೇಲಿನ ಎಲ್ಲಾ ಕಡೆಯಲ್ಲಿ ಅರ್ಥಕ್ಕೆ ಹಾನಿಬರುವ ಸಂದರ್ಭದಲ್ಲಿ ನಿಯಮ ಇದೆ ಎಂದು ಸಂಧಿಯನ್ನು ಮಾಡದೆ ಹಾಗೆಯೇ ಇರಿಸಬೇಕಾಗುತ್ತದೆ. ಎರಡು ತಲೆ = ಇರ್ತಲೆಯೇ ಹೊರತು ಇರ್ದಲೆ ಆಗಬಾರದು. ಹಾಗೆಯೇ ಇರ್ಪತ್ತು, ಕಾಳ್ಕಿಚ್ಚು, ತಲೆಕಟ್ಟು ಇತ್ಯಾದಿಗಳು ಸಹಜ ರೂಪದಲ್ಲೇ ನಾವು ಬಳಸುತ್ತೇವೆ. ನೋಡಿ - ತಲೆಗಟ್ಟು ಹೇಳುವಾಗ ಸ್ವಲ್ಪ ಕಷ್ಟವೇ ಆಗುತ್ತದೆ.

ಅಂದರೆ ವ್ಯಾಕರಣದಿಂದ ಭಾಷೆಯಲ್ಲ. ಭಾಷೆಗೊಂದು ವ್ಯಾಕರಣ. ಅದು ನಮ್ಮ ಬಳಕೆಯ ಸೌಲಭ್ಯಕ್ಕಾಗಿ, ಅರ್ಥಗ್ರಹಿಕೆಗಾಗಿ ಇರುವಂತಾದ್ದು.

ಸೂಕ್ಷ್ಮವಾಗಿ ಆಲೋಚಿಸಿದರೆ, ಕಷ್ಟವಲ್ಲವೆಂದುಕೊಂಡು ಅರ್ಥಮಾಡಿಕೊಂಡರೆ ವ್ಯಾಕರಣ ಎಂದಿಗೂ ಕ್ಲಿಷ್ಟವಲ್ಲ.

- ಸಿ. ಉಪೇಂದ್ರ ಸೋಮಯಾಜಿ