ಪ್ರತಿಯೊಬ್ಬರಿಗೂ ಮನಸ್ಸಿನ ಅನಿಸಿಕೆಗಳನ್ನು ಇನ್ನೊಬ್ಬರ ಮುಂದೆ ಹಂಚಿಕೊಳ್ಳಲು ಇರುವ ವಿಶಾಲವಾದ ದಾರಿ ಭಾಷೆ. ಅದು ಮಾತು ಹಾಗೂ ಬರಹ ಎಂಬೆರಡು ರೀತಿಯಲ್ಲಿ ಇದೆ. ಇಲ್ಲಿ ಎರಡೂ ಸಮಾನ ಹಾಗೂ ಶ್ರೇಷ್ಠ. ಆದ್ದರಿಂದ ಇದು ಅರ್ಥಪೂರ್ಣವಾಗಿರಬೇಕು, ಸಂದಿಗ್ಧವಾಗಿರಬಾರದು. ಕೇಳಿದರೆ ಇನ್ನೂ ಕೇಳುತ್ತಲೇ ಇರಬೇಕು, ಓದುತ್ತಾ ಹೋದರೆ, ಓದಿಸಿಕೊಂಡು ಹೋಗುವ ರೀತಿಯಲ್ಲಿ ಅವೆರಡೂ ಇರಬೇಕಾದ್ದು ಮುಖ್ಯ. “ನುಡಿದರೆ ಮುತ್ತಿನ ಹಾರದಂತಿರಬೇಕು" ಎಂಬ ಬಸವಣ್ಣನ ಮಾತು ಮಾತು ಹೇಗಿರಬೇಕು ಎಂಬುದಕ್ಕೆ ಒಂದು ಸುಂದರ ನಿದರ್ಶನ.

ವಿಷಾದದ ಸಂಗತಿ ಎಂದರೆ ಈಗೀಗ ಕೆಲವರು ಭಾಷಾ ಶುದ್ಧತೆಯ ಬಗೆಗೆ ತಮ್ಮದೇ ಆದ ನಿಲುವನ್ನು ಹೊಂದಿರುವುದು. ಇಂತವರು, ಶುದ್ಧವಾಗಿ ಸ್ಪಷ್ಟವಾಗಿ ಬರೆಯುವವರೂ ಅಲ್ಲ; ಮಾತಾಡುವವರೂ ಅಲ್ಲ. ತಮಗಿಲ್ಲದ್ದೂ ಯಾರಿಗೂ ಬೇಡ ಅನ್ನುವವರು; ತಾವು ಕಲಿತದ್ದು,ಬೆಳೆಸಿಕೊಂಡು ಬಂದದ್ದು ಇದೇ ಆಗಿದೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಕನ್ನಡವು ವಿವಿಧ ರೀತಿಯಲ್ಲಿ ಉಚ್ಚರಿಸಲ್ಪಡುತ್ತದೆ. ಅಂತವರ ಸಂಖ್ಯೆ ಗ್ರಾಂಥಿಕ ಭಾಷೆಯನ್ನು ಉಪಯೋಗಿಸುವವರ ಸಂಖ್ಯೆಗಿಂತ ಬಹಳಷ್ಟು ಹೆಚ್ಚು. ಹೀಗಾಗಿ ಆಡು ಭಾಷೆಯನ್ನೇ ಮಾನ್ಯ ಮಾಡೋಣ ಎಂಬ ಆಡುಭಾಷೆಯ ಪಕ್ಷಪಾತಿಗಳ ಅಭಿಪ್ರಾಯವು ಪ್ರಾದೇಶಿಕತೆಯನ್ನೇ ಸಾರ್ವತ್ರಿಕವೆಂದು ಭಾವಿಸಿದಂತೆ. ಇದು ತಪ್ಪು.

ಇದರೊಂದಿಗೆ ಇಂದಿನ ಅನೇಕ ಭಾಷಾ ಪ್ರವೀಣರು ಪುರೋಹಿತಶಾಹಿಯನ್ನು - ಅದನ್ನು ಎಲ್ಲದಕ್ಕೂ ತಳುಕುಹಾಕಿದ ಹಾಗೆ ಭಾಷೆಗೂ ಜೋಡಿಸಿ ಸ್ಪಷ್ಟ ಮಾತನ್ನು ತಿರಸ್ಕರಿಸುವ ಪಂಡಿತರು ಒಂದು ಕಡೆ, ಇನ್ನೊಂದೆಡೆ ಸರಿಯಾಗಿ ಶಬ್ಧ ಉಚ್ಚಾರ, ವಾಕ್ಯರಚನೆ ಮಾಡಲಾರದ ಬೋಧಕರು. ಹೀಗಿರುವಾಗ ಮಕ್ಕಳನ್ನು ತಿದ್ದುವರಾರು? ಕನ್ನಡ ಭಾಷೆಯು ಇಂದು ಉಳಿದಿರುವುದು ಹಳ್ಳಿಗಳಲ್ಲಿ. ಆದ್ದರಿಂದ ಆ ಹಳ್ಳಿಗಳ ಭಾಷೆಯನ್ನು ಇಟ್ಕ್ಂಬುಡುವ ಅಥವಾ ಇಟ್ಕ್ಂಬ ಅಂದರೆ ಕರ್ನಾಟಕದ ಉದ್ದಗಲಕ್ಕೂ ಹರಡಿರುವ ಕನ್ನಡಿಗರಿಗೆ ಅದು ಅರ್ಥವಾಗುವುದಾದರೂ ಹೇಗೆ?

ಅದರಿಂದಾಗಿಯೇ ಪತ್ರಿಕಾ ಭಾಷೆ, ಪಠ್ಯಪುಸ್ತಕ ಭಾಷೆ,ಸಾಮಾನ್ಯ ಸಾಹಿತ್ಯಿಕ ಭಾಷೆ ಎಂಬುದು ಎಲ್ಲರಿಗೂ ಸಂಪರ್ಕ ಭಾಷೆಯಾಗಿ ಬೆಳೆದಿದೆ. ಅದನ್ನು ಶಿಷ್ಟ ಭಾಷೆ, ಶುದ್ಧ ಭಾಷೆ ಎಂದೂ ಕರೆಯುವುದುಂಟು. ಅಲ್ಲಿ ಸ್ಪಷ್ಟತೆ, ಶುದ್ಧತೆ, ವ್ಯಾಕರಣ ಬದ್ಧತೆ ಮುಖ್ಯ.

ಆದ್ದರಿಂದ ಮನೆಯಲ್ಲಿ, ನಮ್ಮ ಪರಿಸರದವರೊಂದಿಗೆ ಹೇಗೂ ಮಾತಾಡೋಣ. ಆದರೆ, ವೇದಿಕೆಯಲ್ಲಿನ ಮಾತು, ಬರವಣಿಗೆಯಲ್ಲಿನ ಭಾಷೆ ಎರಡೂ ಶಿಷ್ಟವಾಗಿರಲಿ. ಮಾತಿಗಿಂತಲೂ ಬರಹದ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ಬೇಕು. ಏಕೆಂದರೆ, ಬರಹ ಎಂಬುದು ಬಹುಕಾಲ ಇರುವಂತಾದ್ದು, ಅಲ್ಲಿ ಸ್ಪಷ್ಟತೆಯನ್ನು, ಶುದ್ಧತೆಯನ್ನು ಎಲ್ಲರೂ ನಿರೀಕ್ಷಿಸುತ್ತಾರೆ. ಅದು ಬಿಟ್ಟು ಎಲ್ಲರೂ ತಮಗಿಚ್ಚೆ ಬಂದಂತೆ ಮಾತನಾಡಿದರೆ, ಬರೆದರೆ ಮುಂದಿನವರ ಪಾಲಿಗೆ ಈ ಕನ್ನಡ ನಮಗೀಗ ಪೂರ್ವದ ಹಳಗನ್ನಡಕ್ಕಿಂತಲೂ ಓದಲಾಗಲೀ, ಅರ್ಥಮಾಡಿಕೊಳ್ಳಲಾಗಲೀ, ಸಾಧ್ಯವಾಗದೇ ಹೋದೀತು.

ಹಾಗೆಯೇ ಮಾತು. ಕಲಿತವರು ತಾವು ಎಂಬ ಹಣೆಪಟ್ಟಿಯನ್ನು ಹೊಂದಿದ ಮೇಲೆ ಅಬದ್ಧವಾಗಿ, ಅಸಂಬದ್ಧವಾಗಿ, ಅಸ್ಪಷ್ಟವಾಗಿ ಅನರ್ಥಕ್ಕೆಡೆಗೊಡುವಂತೆ ಮಾತಾಡಿದರೆ ಕೇಳುಗರಾದರೂ ಹೇಗೆ ಕುಶಿಪಟ್ಟಾರು. ಆದ್ದರಿಂದ ಭಾನು, ಭಾನುವೇ ಆಗಿ ಇರಲಿ, ವಿದ್ಯಾರ್ಥಿಯನ್ನು ವಿದ್ಯಾರ್ಥಿಯೆಂದೇ ಕರೆಯೋಣ. ಅಂತೆಯೇ ಹಗಲು (ಅಗಲು), ಆದರ (ಹಾದರ), ಹೀಗೆ (ಈಗೆ), ಶಂಕರ (ಸಂಕರ), ಜ್ಞಾನ(ಗ್ನಾನ) ಕಳೆದು (ಕಲೆದು) ಎಂದೇ ಹೇಳೋಣ. ಆವರಣದಲ್ಲಿದ್ದುದನ್ನು ದೂರ ಮಾಡೋಣ. ಮಾತಿನಲ್ಲಿಯ ನಿಲುಗಡೆಯೂ ಹಾಗೆ. ಬಸವನ ನೆನೆದರೆ ಪಾಪ ಕಳೆವುದು, ಪುಣ್ಯ ನಮಗೆ ಎಂಬುದನ್ನು ಬಸವನ ನೆನೆದರೆ ಪಾಪ, ಕಳೆವುದು ಪುಣ್ಯ ನಮಗೆ ಎಂದು ಹೇಳುವುದು ಬೇಡ. ಕೊನೆಗೂ ಅವನು ಮದುವೆ ಮಾಡಿಕೊಂಡು ಬಿಟ್ಟ ಎನ್ನದೆ ಮಾಡಿಕೊಂಡುಬಿಟ್ಟ ಎಂದು ಸೇರಿಸಿಯೇ ಹೇಳೋಣ. ಹೀಗೆ ಹೇಳಿ ಭಾಷೆ ಶುದ್ಧತೆ ಕಾಪಾಡೋಣ.

ಭಾಷೆಯು ಪರಿವರ್ತನಾಶೀಲವಾದರೂ ಅದನ್ನು ಇತರರು ಅರ್ಥಮಾಡಿಕೊಳ್ಳುವ ಚೌಕಟ್ಟಿನಲ್ಲೇ ಇರಲಿ. ನಮ್ಮ ವಸ್ತ್ರಧಾರಣೆಗೆ ನಮಗೆ ಸ್ವಾತಂತ್ರ್ಯ ಇದೆಯೆಂದು ಮನ ಬಂದಂತೆ ಮದುವೆ ಮನೆಯನ್ನು ಪ್ರವೇಶಿಸಲಾದೀತೇ?

ಸ್ಪಷ್ಟಮಾತು, ಶುದ್ಧಬರಹವನ್ನು ನಮ್ಮಶಿಕ್ಷಣ ನೀಡಬೇಕು

ಮೊದಮೊದಲು ಇದರ ಪಾಲನೆ ಕಷ್ಟವಾಗಬಹುದು, ಅಸಾಧ್ಯವೆಂದೆನಿಸಬಹುದು

ಆದರೆ ಅಭ್ಯಾಸ ಮಾಡಿದರೆ ಅಸಾಧ್ಯವಾದುದು ಯಾವುದಿದೆ?

ಶುದ್ಧ ಬರಹವು ಸ್ಪಷ್ಟಮಾತು ನಮ್ಮ ವ್ಯಕ್ತಿತ್ವಕ್ಕೆ ಭೂಷಣವಾಗಿರಲಿ.


- ಸಿ. ಉಪೇಂದ್ರ ಸೋಮಯಾಜಿ