ವರ್ಷಗಳು ಉರುಳಿದಂತೆ ಮಗುವಿನ ವಯಸ್ಸು ಏರುತ್ತಿರುತ್ತದೆ. ಮುಂದಿನ ತರಗತಿಗಳಿಗೆ ಸಾಗುತ್ತಿರುತ್ತದೆ. ಜೊತೆ ಜೊತೆಗೆ ಜ್ಞಾನವೂ ವಿಕಸಿಸುತ್ತಿರುತ್ತದೆ. ಆದರೆ ಆ ಮಗುವು ಒಬ್ಬ ಉತ್ತಮ ನಾಗರೀಕನಾಗುವತ್ತ ಎಷ್ಟು ಸಾಗಿದೇ?. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವು ಇದೀಗ ತಾನೆ ಪ್ರಾರಂಭವಾಗಿದೆ. ಶಿಕ್ಷಕರು ಮತ್ತು ಪೋಷಕರು ಆ ದಿಕ್ಕಿನೆಡೆಗೆ ಮುನ್ನೆಡೆಸಿದರೆ, ಮಗು ಬೆಳೆಯುವುದರ ಜೊತೆಗೆ ಆಂತರಿಕವಾಗಿ ಸಂಪದ್ಭರಿತವಾಗುತ್ತದೆ. ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣವೂ ಸ್ಪಂದಿಸಬೇಕಿದೆ.

ಅದಕ್ಕೆ ಅತ್ಯಂತ ಪ್ರಮುಖವಾದ ಹತ್ತು ವಿಚಾರಗಳನ್ನು ಅವಲೋಕಿಸಿ, ಆ ದೆಸೆಯಲ್ಲಿ ತೊಡಗಿಕೊಂಡರೆ ಮಗುವಿನ ಪರಿಪೂರ್ಣ ಬೆಳವಣಿಗೆ ಕಾಣಬಹುದು.

ಸಮಯ:-

ಮಗುವು ಸ್ವತಂತ್ರವಾಗಿ ಯೋಚಿಸಲು ಸಮಯ ನೀಡಬೇಕು. ಯಾವುದಾದರೂ ಒಂದು ಕೆಲಸ ಅಥವಾ ಪ್ರಶ್ನೆ ಮುಂದಿಟ್ಟಾಗ, ಅವರಿಗೆ ಕೆಲ ಸಮಯ ಕೋಡಬೇಕು. ಆ ಸನ್ನಿವೇಷದಲ್ಲಿ ಕೆಲ ಪ್ರತಿಭಾವಂತ ಮಕ್ಕಳು ತಕ್ಷಣ ಉತ್ತರ ಹೇಳಿಬಿಡುತ್ತಾರೆ. ಅದರಿಂದ ಉಳಿದ ಬಹುತೇಕ ಮಕ್ಕಳಿಗೆ ಯೋಚನೆ ಮಾಡಲು ಅವಕಾಶವೇ ಸಿಗದಂತಾಗುತ್ತಿದೆ. ಅದಕ್ಕೆ ಎಲ್ಲರಿಗೂ ಒಂದು ಸಮಯ ನಿಗಧಿಮಾಡಿ ಉತ್ತರ ಹೇಳಲು ಸೂಚಿಸಬೇಕು. ಆಗ ಉಳಿದವರೂ ಯೋಚಿಸಲಾರಂಭಿಸುತ್ತಾರೆ. ಅವರ ಯೋಚನೆಗಳೂ ಪ್ರತಿಭಾವಂತರಷ್ಟೆ ಮಹತ್ವದ್ದಾಗಿರುತ್ತವೆ. ಯಾಕೆಂದರೆ ಪ್ರತಿಯೊಂದು ಮಗುವೂ ತನ್ನದೇ ಆದ ಯೋಚನಾಲಹರಿ ಹೊಂದಿರುವುದು ದೈವದತ್ತವಾಗಿ ಬಂದ ಕೊಡುಗೆಯೂ ಹೌದು.

ಮಗು ಬೇರೆಯವರ ಆಲೋಚನೆಗಳ ಕುರಿತು ಪರ‍್ಯಾಲೋಚಿಸುತ್ತ, ತನ್ನ ಯೋಚನೆಗಳ ಕುರಿತು ಚಿಂತನ ಮಾಡಿಕೊಳ್ಳುತ್ತದೆ. ಕೆಲ ಸಾರಿ ಮಗುವಿನ ಯೋಚನಾ ಲಹರಿಯು ಸಂಬಂಧವಿರದ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಆಗ ಗೊಂದಲದಿಂದಾಗಿ ತಪ್ಪು ಯೋಚನೆಗಳೂ ಮೂಡಬಹುದು. ಅವು ಕಿರಿಕಿರಿಯನ್ನೂ ಉಂಟುಮಾಡಬಹುದು. ಅವು ಅವರ ಯೋಚನೆಗಳು. ಅದೇ ಅವರ ಕಲಿಕೆಯ ಮೂಲ ಎಂಬುದು ಇಲ್ಲಿ ಬಹಳ ಮುಖ್ಯವಾದುದು.

ಶಿಕ್ಷಕರು ಎಲ್ಲರಿಗೂ ಅವಕಾಶ ನೀಡುವಂತ ಚಟುವಟಿಕೆ ರೂಪಿಸಿಕೊಳ್ಳಬೇಕು. ಉದಾಹರಣೆಗೆ ಒಬ್ಬ ಶಿಕ್ಷಕರು ಒಂದು ಪ್ರಶ್ನೆಯನ್ನು ಕೇಳಿದಾಗ, ಶಿಕ್ಷಕರು ಎಡಗೈ ಎತ್ತಿದಾಗ ಮಕ್ಕಳು ಯೋಚನೆ ಮಾಡಲು ಪ್ರಾರಂಭಿಸಬೇಕು. ಸ್ವಲ್ಪ ಸಮಯದ ನಂತರ ಬಲಗೈ ಎತ್ತಿದಾಗ ಉತ್ತರ ಹೇಳಬೇಕು.

ಅವಕಾಶ:-

ಪ್ರತಿ ಮಗುವೂ ತನ್ನ ಸ್ವಂತ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವಿರಬೇಕು. ಮಗು ಕಲಿತ/ಕಲಿಯುತ್ತಿರುವ ಅನೇಕ ವಿಷಯಗಳನ್ನು ತನ್ನ ದಿನ ನಿತ್ಯದ ಬದುಕಿನ ಜೊತೆಗೆ ಹೋಲಿಕೆ ಮಾಡಿಕೊಳ್ಳಲು ಆಪೇಕ್ಷಿಸುತ್ತದೆ. ಅದಕ್ಕೆ ಪ್ರತಿಯೊಂದನ್ನೂ ಸ್ವತಃ ಅನುಭವಿಸಬೇಕೆಂಬ ಅಭಿಲಾಷೆ ಇರುತ್ತದೆ. ಮಗುವಿನ ಆಸೆಯಂತೆ ಪಠ್ಯದ ವಿಷಯ ಕಲಿಕೆಯು ಮಗುವಿನ ಅನುಭವಕ್ಕೆ ಬರುವಂತಿರಬೇಕು. ದಿನನಿತ್ಯದ ಚಟುವಟಿಕೆಗಳಲ್ಲಿ ಮಗು ನೋಡಿದ, ಕೇಳಿದ, ಮಾಡಿದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪಠ್ಯವು ಸಾಗಬೇಕು.

ಮಕ್ಕಳಿಗೆ ನಾಳೆ ಮಾಡುವ ಚಟುವಟಿಕೆ ಕುರಿತು ಮೊದಲೇ ಕೆಲ ಅಂಶಗಳನ್ನು ತಿಳಿಸಬೇಕು. ಉದಾಹರಣೆಗೆ ನಾಳೆ ಪಠ್ಯದ ಚಟುವಟಿಕೆ ನೆರಳು. ಆಗ ಮಕ್ಕಳಿಗೆ ಈ ದಿನ ರಾತ್ರಿ ಟಾರ್ಚ್‌ನ್ನು ಬಳಸಿ ನೆರಳನ್ನು ಸೃಷ್ಟಿಸುವ ಆಟವಾಡಿ ಬರಲು ತಿಳಿಸಬೇಕು. ಸೂರ‍್ಯನ ಬೆಳಕಿನಲ್ಲಿ ಮತ್ತು ಕೊಠಡಿಯ ಲೈಟ್ ಬೆಳಕಿನಲ್ಲಿ ಅವರ ನೆರಳನ್ನು ಗಮನಿಸಲು ತಿಳಿಸಿದರೆ ಸಾಕು.

ಯೋಚನೆ:-

ಮಗು ದೊಡ್ಡವರ ರೀತಿಯಲ್ಲಿ ಯೋಚಿಸಬೇಕು ಎಂದು ಬಯಸುವುದು ತರವಲ್ಲ. ಮಕ್ಕಳಿಗೆ ಯೋಚನೆ ಮಾಡಲು ಹೆಚ್ಚು ಹೆಚ್ಚು ಚಟುವಟಿಕೆಗಳನ್ನು ಸೃಷ್ಟಿಸಬೇಕು. ಯೋಚನೆಗೆ ಹಚ್ಚಿದಾಗ ಮೊದಲು ಅವರು ಗೊಂದಲಕ್ಕೆ ಒಳಗಾಗುತ್ತಾರೆ. ತಳಮಳಗೊಳ್ಳಬಹುದು. ಮುಂದೆ ಸಾಗಿದಂತೆ ಚೈತನ್ಯದಾಯಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಅಂತಿಮವಾಗಿ ಪ್ರತಿಫಲ ಪಡೆದಾಗ ಸಂಶೋಧನಾ ವಿಧಾನ ಅವರಿಗೆ ಗೊತ್ತಿಲ್ಲದಂತೆ ಅವರೊಳಗೆ ಗೂಡುಕಟ್ಟಿರುತ್ತದೆ.

ಅವರಿಗೆ ಆ ಹಾದಿಯು ಸುಲಭವಾಗಿ ಕೈಗೆಟುಕುವುದಿಲ್ಲ. ಮಕ್ಕಳು ಎಡವುತ್ತಾರೆ, ಹಾದಿ ತಪ್ಪುತ್ತಾರೆ, ಸರಿಯಾದ ಹಾದಿ ತಿಳಿಯದೆ ಕಂಗಾಲಾಗುತ್ತಾರೆ. ಆ ಪರಿಸ್ಥಿತಿಯಲ್ಲಿ ಅವರು ಸರಿಯಾದ ಪಥಕ್ಕೆ ಮರಳುವಂತೆ ಪ್ರೋತ್ಸಾಹನೀಡಬೇಕಷ್ಟೆ. ಸ್ವಲ್ಪ ಮುಂದಕ್ಕೆ ತಳ್ಳಬೇಕು. ಅದು ಮಕ್ಕಳಿಗೆ ನೆರವಾಗಿ, ಅನ್ವೇಷಣೆ ಮುಖಾಂತರವೇ ಸರಿ-ತಪ್ಪು ಯಾವುದು ಎಂಬುದನ್ನು ಮನಗಾಣುವಂತಾಗುತ್ತಾರೆ.

ಉದಾಹರಣೆಗೆ:- ಮಕ್ಕಳಿಗೆ ಕೆಂಪು ಬಣ್ಣದ ಹಾಳೆ ಮತ್ತು ಕೆಂಪು ಬಣ್ಣದ ಸೀಸಕಡ್ಡಿಯನ್ನು ಕೊಡಬೇಕು. ಹಾಳೆಯಲ್ಲಿ ಚಿತ್ರ ಬಿಡಿಸಲು ಸೂಚಿಸಿರಿ. ಮಕ್ಕಳು ಒಂದು ರೀತಿಯ ಹೋರಾಟವನ್ನು ಮಡಲಾರಂಭಿಸುತ್ತಾರೆ. ಇದು ಅವರಿಗೆ ಮೋಜನ್ನೂ ನೀಡುವುದರಲ್ಲಿ ಸಂದೇಹವಿಲ್ಲ.

ಆತ್ಮವಿಶ್ವಾಸ:-

ತನ್ನ ಶಕ್ತಿಯಲ್ಲಿ ತನಗೆ ಅಚಲ ನಂಬಿಕೆ ಇದ್ದರೆ ಮಾತ್ರ ಬೆಟ್ಟವನ್ನಾದರೂ ಎತ್ತಿ ಇಡಬಹುದು. ಯಶಸ್ಸಿಗೆ ಅಪಾರ ಬುದ್ದಿ ಮತ್ತೆ ಬೇಕಿಲ್ಲ. ಇರುವ ಬುದ್ದಿಯ ಸದ್ವಿನಿಯೊಗ ಮಾಡಿಕೊಳ್ಳುವ ಕುಶಲತೆ ಇದ್ದರೆ ಸಾಕು. ಯಶಸ್ಸೂ ಅದೃಷ್ಟದಿಂದ ಬರುವಂಥದ್ದಲ್ಲ. ಆತ್ಮವಿಶ್ವಾಸ ಅವಿರತ ಪ್ರಯತ್ನದಿಂದ ಬರುವಂತದ್ದು. ಆತ್ಮ ವಿಶ್ವಾಸವೆಂಬುದು ಒಂದು ಅದ್ಭುತ ಟಾನಿಕ್. ಇವೆಲ್ಲವೂ ಆತ್ಮವಿಶ್ವಾಸದ ಬಗ್ಗೆ ತಿಳಿಸುತ್ತವೆ.

ಮಗುವಿಗೆ ತನ್ನಲ್ಲಿ ಬರುವ ಆಲೋಚನೆಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಎಲ್ಲರಂತೆ ಅವರಲ್ಲೂ ಅನೇಕ ವಿಷಯಗಳ ಕುರಿತ ಅನಿಶ್ಚಿತತೆ ಮನೆಮಾಡಿರುತ್ತದೆ. ಅದಕ್ಕಾಗಿ ಅವರು ಸಮಯ-ಶ್ರಮ ವ್ಯರ್ಥಮಾಡುತ್ತಿರುತ್ತಾರೆ. ಆದರೂ ಮಗು ಇನ್ನೊಬ್ಬರ ಮಾರ್ಗದರ್ಶನ ಬಯಸುವುದಿಲ್ಲ. ಯಾಕೆಂದರೆ ಮಗು ತನ್ನ ಯೋಚನೆಗಳ ಮೇಲೆ ಇತರರು ನಂಬಿಕೆ ಹೊಂದಬೇಕೆಂದು ಆಶಿಸುತ್ತದೆ. ತನ್ನ ಪ್ರಯತ್ನದಲ್ಲಿ ತಪ್ಪುಗಳಿದ್ದರೂ, ಅದು ನಿರಂತರವಾಗಿ ನಡೆಯುತ್ತಿದ್ದರೂ, ಅದನ್ನೆಲ್ಲಾ ಸರಿ ಮಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಹಾಗಾಗಿ ತನ್ನ ಸಾಮರ್ಥ್ಯದ ಮೇಲೆ ಇತರರು ವಿಶ್ವಾಸ ಮೂಡಿಸಿಕೊಳ್ಳಬೇಕು ಎಂಬುದು ಮಗುವಿನ ಅಭಿಲಾಷೆಯಾಗಿರುತ್ತದೆ.

ವಿಶ್ಲೇಷಣೆ:-

ಹೇಗೆ ವಿಶ್ಲೇಷಣೆ ಮಾಡಬೇಕು ಎಂಬುದನ್ನು ಕಲಿಯುವಾಗ ಮಗುವಿಗೆ ನೆರವು ಬೇಕಾಗುತ್ತದೆ. ಅಭ್ಯಾಸ ಮಾಡುವಾಗ ಎದುರಾಗುವ ಸಮಸ್ಯೆಗಳಿಗೆ ಕಾರಣ-ಪರಿಣಾಮಗಳನ್ನು ತಿಳಿದು ಕಲಿಕೆಯ ಸರಳ ಹಾದಿಯನ್ನು ಕಂಡು ಕೊಳ್ಳಲು ವಿಶ್ಲೇಷಣೆ ಅಗತ್ಯ. ತನ್ನ ಸಮಸ್ಯೆಗಳನ್ನು ಮೀರಿ ಬೆಳೆಯುವಂತ ಸಾಮರ್ಥ್ಯವನ್ನು ಮಗು ಗಳಿಸಿಕೊಳ್ಳಬೇಕು. ಮಕ್ಕಳು ಎಸಗುವ ತಪ್ಪುಗಳನ್ನು ಬೇರೆಯವರು ನೇರವಾಗಿ ಹೇಳಬಾರದು. ಅವರಿಗೆ ಮನನವಾಗುವ ಪ್ರಶ್ನೆ, ಸನ್ನಿವೇಷಗಳನ್ನು ಸೃಷ್ಟಿಸಬೇಕು. ಅಂದರೆ ಎಲ್ಲಿ-ಏನು ತಪ್ಪಾಗಿದೆ ಎಂಬುದು ಅವರಿಗೆ ಅರ್ಥವಾಗಬೇಕು. ಅದರಿಂದ ಅವರು ಸ್ವಂತಿಕೆಯಿಂದ ಕಲಿಯುವ ಶಕ್ತಿ ಗಳಿಸಿಕೊಳ್ಳುತ್ತಾರೆ.

ಸಮಸ್ಯೆ-ಪರಿಹಾರ :-

ಮಗು ತನಗೆ ಎದುರಾಗುವ ಎಲ್ಲ ರೀತಿಯ ಸಮಸ್ಯೆಗಳನ್ನು ತಾನೇ ಪರಿಹಾರ ಮಾಡಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಅವರು ತಮ್ಮಲ್ಲಿರುವ ಸಂಪನ್ಮೂಲ-ಸೃಜನಶೀಲತೆಯನ್ನು ಅದಕ್ಕೆ ಬಳಸಲು ಪ್ರೇರಣೆ ನೀಡಬೇಕು. ಯಾಕೆಂದರೆ ಸಮಸ್ಯೆ ಬಂದಾಗ ಬಗೆಹರಿಸುವ ವ್ಯಕ್ತಿ ಬೇಕಾಗಲ್ಲ, ಅವರನ್ನು ಆ ಸಮಯದಲ್ಲಿ ಸಂಪೂರ್ಣವಾಗಿ ನಂಬುವ ವ್ಯಕ್ತಿಯ ಅಗತ್ಯವಿರುತ್ತದೆ.

ಉದಾಹರಣೆಗೆ:- ತರಗತಿ ಕೊಠಡಿಯಲ್ಲಿ ಗೊಂಬೆಯನ್ನು ಮಾಡಿಸುವಾಗ, ಅಲ್ಲಿ ಗಂಟು ಹಾಕಲು ಮಕ್ಕಳು ವಿಫಲರಾಗುವ ಸಂದರ್ಭ. ಅದಕ್ಕೆ ಗಂಟನ್ನೇ ಹಾಕಿ ಎಂದು ಶಿಕ್ಷಕರು ಗಂಟುಬೀಳಬಾರದು. ನಿಮಗೆ ಅನುಕೂಲವಾಗುವಂತೆ ಮಾಡಿರಿ ಎಂದು ಹುರಿದುಂಬಿಸಬೇಕು. ಆಗ ಕೆಲವರು ರಬ್ಬರ್ ಹಾಕಬಹುದು, ಕೆಲವರು ಟೇಪ್ ಹಚ್ಚಬಹುದು. ಇನ್ನು ಕೆಲವರು ಗಂಟು ಹಾಕಲೂ ಬಹುದು. ಅವರವರ ಸೃಜನಶೀಲತೆಗೆ ತಕ್ಕಂತೆ ಸಂತಸದಿಂದ ಆ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಅದರ ಜೊತೆಗೆ ಆ ಸಮಸ್ಯೆಗೆ ತಮ್ಮದೇ ಆದ ಪರಿಹಾರ ಕಂಡುಕೊಳ್ಳುವಲ್ಲಿ ಯಶಕಾಣುತ್ತಾರೆ.

ಮಾರ್ಗದರ್ಶನ:-

ಹಿರಿಯರು ಮಾರ್ಗದರ್ಶನ ನೀಡಲೇಬೇಕಾದರೆ ಅದು ಮಕ್ಕಳಿಗೆ ಜಾಗೃತಿ ಮೂಡಿಸುವಂತಿರಬೇಕು. ಮಕ್ಕಳು ವಾಸ್ತವವನ್ನು ಒಪ್ಪಿಕೊಳ್ಳುವ ಸೂಕ್ಷ್ಮತೆಯನ್ನು ಅವರಲ್ಲಿ ಬೆಳೆಸಬೇಕು. ಸಂತಸದಿಂದ ಅವರು ಅನುಭವಿಸಲು ಅನುವು ಮಾಡಿಕೊಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಹೆಚ್ಚು ನೋಡಿರಿ, ಹೆಚ್ಚು ಆಲಿಸಿರಿ, ಹೆಚ್ಚು ಅನುಭವಿಸಿರಿ ಹಾಗೆಯೇ ಹೆಚ್ಚು ಕಾರ‍್ಯ ಪ್ರವೃತ್ತರಾಗಿರುವಂತೆ ಸೂಚಿಸಬೇಕು. ನೋಡಲು ಉತ್ತಮವಲ್ಲದಾಗಿದ್ದರೆ ಕಣ್ಣುಮುಚ್ಚಲು ತಿಳಿಸಬೇಕು. ಬರೀ ಕೇಳಿಸುವಂತಿದ್ದರೆ ಆಲಿಸಲು ಪ್ರೋತ್ಸಾಯಿಸಬೇಕು. ಪ್ರಚೋದನೆ ಮಾಡುವಂತಿದ್ದರೆ ಮುಟ್ಟಲು ಅವಕಾಶ ಕೊಡಬೇಕು. ಯಾವುದೇ ಚಟುವಟಿಕೆಗೆ ಪೂರಕ ಸಾಮಾಗ್ರಿ ನೀಡಿದ ತಕ್ಷಣ ಚಟುವಟಿಕೆ ಪ್ರಾರಂಭಿಸಬಾರದು. ಮಕ್ಕಳು ಆ ಪರಿಕರವನ್ನು ವೀಕ್ಷಿಸಲು/ಅನುಭವಿಸಲು ಅವಕಾಶ ಕೊಡಬೇಕು. ಮಕ್ಕಳು ಆ ಸಾಮಾಗ್ರಿ ಕುರಿತು ತಮ್ಮಷ್ಟಕ್ಕೆ ತಮಗೆ ವಿಶ್ವಾಸ ಬೆಳಸಿಕೊಂಡಾಗ ಚಟುವಟಿಕೆ ಪ್ರಾರಂಭಿಸಿದರೆ ಹೆಚ್ಚು ಪ್ರಭಾವ ಬೀರುತ್ತದೆ.

ಪ್ರಶ್ನೆ:-

ಮಕ್ಕಳಿಗೆ ತಮ್ಮ ಸಾಮರ್ಥ್ಯದ ಕುರಿತು ಮತ್ತು ತಮ್ಮ ತಿಳುವಳಿಕೆ/ನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಲು ಅವರೇ ಪ್ರಶ್ನೆ ಹಾಕಿಕೊಳ್ಳುವಂತೆ ಮಾಡಬೇಕು. ಅದರಿಂದ ಅವರಿಗೆ ತಮ್ಮ ತಿಳುವಳಿಕೆಯ ಚೌಕಟ್ಟಿನ ಪರಿಮಿತಿ ಅರಿವಾಗುತ್ತದೆ. ಅದಕ್ಕೆ ಪೂರಕವಾಗಿ ಸಮರ್ಪಕ ಹಾದಿ ರೂಪಿಸಿಕೊಳ್ಳಲು ನೆರವಾಗುತ್ತದೆ. ಅಂದರೆ ಸರಿಯಾದುದನ್ನು ಮಾತ್ರ ಆಯ್ಕೆಮಾಡಿಕೊಳ್ಳುತ್ತಾ, ಅನವಶ್ಯಕವಾದುವುಗಳನ್ನು ತೆಗೆದು ಹಾಕುವ ಗುಣ ಪ್ರಭಲವಾಗುತ್ತದೆ. ಈ ರೀತಿಯಾಗಿ ಮಗು ಒಂದು ವಿಷಯ ಅಥವಾ ಫಲಿತಾಂಶವನ್ನು ಖಚಿತಪಡಿಸಿಕೊಂಡು ಸರಿಯಾಗಿ ಮುಂದಕ್ಕೆ ಸಾಗುವಂತೆ ಮಾಡಬಹುದು.

ಮೌಲ್ಯಮಾಪನ:-

ಮಗುವಿನ ನಿರ್ಧಾರ, ಮೌಲ್ಯಮಾಪನ ಹಾಗೂ ತೀರ್ಮಾನಗಳಿಗೆ ನಾವು ಗೌರವ ಕೊಡಬೇಕು. ಆದರೆ ನಮ್ಮಲ್ಲಿ ಹೆಚ್ಚು ಜನರು ಮಕ್ಕಳ ಅಕ್ಷರ ಜ್ಞಾನಕ್ಕೆ ಮಾತ್ರ ಹೆಚ್ಚು ಮರ್ಯಾದೆ ಕೊಡುತ್ತಿರುವುದರಿಂದ ಮಕ್ಕಳಲ್ಲಿ ಅದು ಮಾತ್ರ ಬೆಳೆಯುತ್ತದೆ. ಮಗು ತನ್ನೊಳಗೆತಾನೇ ಸ್ವಮೌಲ್ಯಮಾಪನದ ಬೀಜಬಿತ್ತಿ, ಮರವಾಗುವಂತೆ ರೂಪಿಸಿಕೊಳ್ಳಬೇಕು. ಹಾಗಾದಲ್ಲಿ ಸ್ವಬೆಳವಣಿಗೆ, ಸ್ವ ಅನುಭವದ ಮುಖಾಂತರ ಆಳವಾದ ಜ್ಞಾನವನ್ನು ಅರಿಯುವಲ್ಲಿ ಸಮರ್ಥರಾಗುತ್ತಾರೆ.

ಸ್ವೀಕಾರ:-

ಕಟ್ಟ ಕಡೆಗೆ ಮಗು ಹೇಗಿರುತ್ತದೋ ಹಾಗೆ ಸ್ವೀಕರಿಸುವ ಗುಣ ಇರಬೇಕು. ಪ್ರತಿಯೊಬ್ಬರೂ ಇನ್ನೊಬ್ಬರಿಗಿಂತ ಭಿನ್ನವಾದ ಸಾಮರ್ಥ್ಯ ಹೊಂದಿರುತ್ತಾರೆ ಎಂಬುದು ಮನಗಾಣಬೇಕು. ಇನ್ನೊಬ್ಬರಂತೆ ಆಗು ಎಂದು ಹೋಲಿಸುವ ಪ್ರವೃತ್ತಿ ಒಳ್ಳೆಂiiದಲ್ಲ. ಮಗುವಿಗೆ ನಿನ್ನಂತೆ ನೀನು ವಿಕಾಸವಾಗು ಎಂದು ಪ್ರೋತ್ಸಾಯಿಸಬೇಕು. ನಾವು ಬೆಳೆದಾಗ ಮಾತ್ರ ಪ್ರಪಂಚವೂ ದೊಡ್ಡದಾಗಿ ಬೆಳೆಯುತ್ತದೆ. ಇಲ್ಲಿರುವ ಪ್ರತಿಯೊಬ್ಬರಲ್ಲೂ ಭಿನ್ನತೆ ಇರುವುದರಿಂದ ಪ್ರಪಂಚ ಸುಂದರವಾಗಿ ಕಾಣುತ್ತಿದೆ. ನಾವೆಲ್ಲರೂ ಒಂದೇ, ಆದರೆ ನಮ್ಮಲ್ಲಿ ವೈವಿಧ್ಯತೆ ಇದೆ ಎಂಬುದು ಮಕ್ಕಳಿಗೆ ಸರಿಯಾಗಿ ಮನನ ಮಾಡಿಕೊಡಬೇಕು.

ಪ್ರತಿಯೊಂದು ಮಗುವೂ ತನ್ನದೇ ಆದ ವಿಶಿಷ್ಟ ಪ್ರತಿಭೆಯನ್ನು ಹೊಂದಿರುತ್ತದೆ. ಅವರಲ್ಲಿನ ಸಾಮರ್ಥ್ಯವನ್ನು ಯಾರೂ ಅಲ್ಲಗಳೆಯಬಾರದು. ಆ ಹಿನ್ನಲೆಯಲ್ಲಿ ಇಲ್ಲಿನ ಅಂಶಗಳನ್ನು ಮನನ ಮಾಡಿಕೊಂಡರೆ ಹೆಚ್ಚು ಲಾಭ ಪಡೆಯಬಹುದಾಗಿದೆ.

 

ಪರಮೇಶ್ವರಯ್ಯ ಸೊಪ್ಪಿಮಠ