ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಜೀನಿಯಸ್ ಎಂಬುದು ಪ್ರಪಂಚಕ್ಕೆ ಗೊತ್ತಿರುವ ಸತ್ಯ. ಆದರೆ ನಮ್ಮಲ್ಲಿ ಅದರ ಕುರಿತು ಸರಿಯಾದ ಜ್ಞಾನ ಮತ್ತು ಪ್ರೋತ್ಸಾಹ ಕೊರತೆಯಿಂದ ಅನೇಕ ಮಕ್ಕಳು ಅರಳುವ ಮೊದಲೆ ಬಾಡಿಹೋಗುತ್ತಿದ್ದಾರೆ. ಪ್ರತಿಭಾನ್ವಿತ ಮಕ್ಕಳ ಕುರಿತು ನಾವು ಇನ್ನಾದರೂ ಚಿಂತಿಸಲೇ ಬೇಕಿದೆ. ಆ ಮಗು ನಮ್ಮ ಮನೆಯಲ್ಲಿಯೇ ಇರಬಹುದು. ಅದಕ್ಕೆ ಜಾಗ್ರತರಾಗಲು ಅಗತ್ಯ ಅಂಶಗಳ ಕುರಿತ ಪುಟ್ಟ ಲೇಖನ ಇದಾಗಿದೆ.

ಶಾಲೆಯಲ್ಲಿನ ಒತ್ತಡದ ಕಲಿಕೆಯಿಂದ ನನಗೆ ಬೇಸರ ಹಾಗೂ ದುಃಖವಾಗಿದೆ. ಅದಕ್ಕೆ ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಯಾಕೆಂದರೆ ಶಾಲೆಯಲ್ಲಿ ಕಲಿಸುವ ಎಲ್ಲಾ ವಿಷಯಗಳು ನನಗೆ ತಿಳಿದಿವೆ. ನನಗೆ ಅವೆಲ್ಲಾ ಗೊತ್ತಿರುವುದರಿಂದ ಮುಂದೆ ಮುಂದೆ ಮಾತನಾಡುತ್ತೇನೆ. ನನಗೆ ಅದರ ಮುಂದಿನದನ್ನು ತಿಳಿಯುವ ಆಸಕ್ತಿ. ಆದರೆ ಇದು ನನ್ನ ಸಹಪಾಠಿಗಳಿಗೆ ಸ್ವಲ್ಪನೂ ಇಷ್ಟವಾಗುತ್ತಿಲ್ಲ. ತರಗತಿಯ ಶಿಕ್ಷಕರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರೆ ಅವರು ಸಹಿಸುವುದಿಲ್ಲ. ನನಗಂತೂ ಶಾಲೆಗೆ ಹೋಗುವುದೇ ಬೇಡ ಎನಿಸುತ್ತಿದೆ ಎಂದು ೮ನೇ ತರಗತಿ ವಿದ್ಯಾರ್ಥಿನಿ ಕುಸುಮ ಹೇಳುವುದನ್ನು ಕೇಳಿದರೆ, ಆಕೆಯಲ್ಲಿನ ಪ್ರತಿಭೆಯನ್ನು ಹತ್ತಿಕ್ಕಲಾಗುತ್ತಿದೆ ಎಂಬ ಅನುಮಾನಬರುತ್ತದೆ.

ಈ ತರಹದ ವೈವಿಧ್ಯಮಯ ಸಮಸ್ಯೆಗಳನ್ನು ಪ್ರತಿಭಾನ್ವಿತರಿರುವ ಕುಟುಂಬಗಳಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ. ಆ ಮಕ್ಕಳು ತಮ್ಮ ವಯಸ್ಸಿನಲ್ಲಿ ಇತರೆ ಮಕ್ಕಳಿಗಿಂತ ಹೆಚ್ಚಿನ ಬುದ್ಧಿಮಟ್ಟವನ್ನು ತೋರಿಸುತ್ತಿರುತ್ತಾರೆ. ಈ ಪ್ರತಿಭೆಗಳು ಹೆಚ್ಚಿನ ರೀತಿಯಲ್ಲಿ ಅರಳದಿರಲು ಪಾಲಕರಲ್ಲಿನ ಎರಡು ಮುಖ್ಯ ಕೊರತೆಗಳನ್ನು ಗುರುತಿಸಬಹುದು. ಮೊಟ್ಟಮೊದಲನೆಯದಾಗಿ ಪ್ರತಿಭಾನ್ವಿತ ಮಗುವಿನ ಬೆಳವಣಿಗೆಯನ್ನು ಅರಿಯುವ ಜ್ಞಾನ ಅವರಲ್ಲಿರುವುದಿಲ್ಲ. ಮತ್ತೊಂದು ಮಗು ಆ ನಿಟ್ಟಿನಲ್ಲಿ ಬೆಳೆಯುತ್ತಿದೆ ಎಂಬುದನ್ನು ಅರಿಯಲು ವಿಫಲರಾಗುವುದು. ಆಗ ಪ್ರತಿಭಾನ್ವಿತ ಮಕ್ಕಳನ್ನು ಪೋಷಿಸುವುದು ಪಾಲಕರಿಗೆ ಸಾವಾಲಿನ ಕೆಲಸವಾಗುತ್ತದೆ. ಅದರಿಂದ ಪಾಲಕರು ತೊಂದರೆ ಒಳಗಾದರೆ, ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಾರೆ.

ಮೇಧಾವಿ ಮಕ್ಕಳ ಕುರಿತ ಸರಿಯಾದ ಮಾಹಿತಿ ದೊರಕದಿದ್ದರೆ ಮನೆ, ಶಾಲೆ, ಸಮಾಜ, ಸಂಘ ಸಂಸ್ಥೆಗಳಿಂದ ಸರಿಯಾದ ಪ್ರೋತ್ಸಾಹ ಸಿಗುವುದಿಲ. ಇನ್ನೂ ವಿಪರ್ಯಾಸವೆಂದರೆ ನಮ್ಮಲ್ಲಿರುವ ಆಡಳಿತ ವ್ಯವಸ್ಥೆಯಿಂದ ಆ ಮಕ್ಕಳನ್ನು ಗುರುತಿಸಲೂ ಆಗದಂತಾಗಿದೆ. ಇನ್ನು ಅವರ ಪೋಷಣೆ, ಕಲಿಕಾ ವ್ಯವಸ್ಥೆ ದೂರದ ಮಾತಾಯಿತು. ಕೆಲವು ಸರಳವಾದ ಹಂತಗಳ ಮುಖಾಂತರ ಜೊತೆಗೆ ಕೆಲ ಗುಣಾತ್ಮಕ ಅಂಶಗಳನ್ನು ಗಮನಿಸುವಿಕೆಯಿಂದ ಈ ಪಯಣವನ್ನು ಸುಮಧುರವಾಗಿಸಬಹುದು. ಆ ದಾರಿಯಲ್ಲಿ ಸಾಗಿದಾಗ ಮಗುವಿನ ಜೊತೆಗೆ ಪಾಲಕರಿಗೂ ಸಂತಸ ಪಡುತ್ತಾರೆ. ಹಾಗಾಗಿ ಪೋಷಕರು ಮಾಡಲಬೇಕಾದ ಅತ್ಯಂತ ಮಹತ್ವದ ಎರಡು ಕೆಲಸವೆಂದರೆ ಆ ತರಹದ ಮಕ್ಕಳನ್ನು ಗುರುತಿಸುವುದು ಮತ್ತು ಅದಕ್ಕೆ ಪೂರಕವಾಗಿ ಪೋಷಿಸಿ ಬೆಳೆಸುವುದಾಗಿದೆ.

 

ಪ್ರತಿಭಾನ್ವಿತ ಮಗುವಿನ ಗುರುತಿಸುವಿಕೆ.

ವಿಸೇಷ ಸಾಮರ್ಥ್ಯದ ಮಕ್ಕಳನ್ನು ಒಂದೆ ವಿಧಾನದಿಂದ ಗುರುತಿಸಲು ಸಾಧ್ಯವಿಲ್ಲ. ಅವರಲ್ಲಿ ವೈವಿಧ್ಯಮಯ ಪ್ರತಿಭೆಗಳು ಅಡಗಿರುತ್ತವೆ. ಅದಕ್ಕೆ ಮೊದಲ ಹೆಜ್ಜೆ ಎಂದರೆ ಚಿಕ್ಕವರಿದ್ದಾಗಿನಿಂದಲೆ ಅವರ ಬೆಳವಣಿಗೆಯ ಮೇಲೆ ಗಮನ ಕೊಡಬೇಕು. ಪ್ರತಿಭಾನ್ವಿತ ಮಕ್ಕಳು ದೈಹಿಕ ವಯಸ್ಸಿಗಿಂತ ಮಾನಸಿಕ ವಯಸ್ಸಿನಲ್ಲಿ ಸಾಕಷ್ಟು ಮುಂದಿರುತ್ತಾರೆ. ಹಾಗಾಗಿ ಈ ವಿಶೇಷ ಮಕ್ಕಳು ಎಲ್ಲಾ ರಂಗದಲ್ಲೂ ನಿರೀಕ್ಷಿತ ಮಟ್ಟಕ್ಕಿಂತ ಮುಂದೆ ಹೋಗಿರುತ್ತಾರೆ. ಶಿಶುವಾಗಿದ್ದಾಗ ಅವರ ದೈಹಿಕ ಬೆಳವಣಿಗೆಯನ್ನು ಗಮನಿಸಿವುದು ( ಬೇಗನೆ ಕುಳಿತುಕೊಳ್ಳುವುದು, ತಲೆ ನಿಲ್ಲುವುದು, ಎದ್ದು ಓಡಾಡುವುದು ಇತ್ಯಾದಿ). ಆ ಮಕ್ಕಳಲ್ಲಿ ಗ್ರಹಿಸುವಿಕೆಯೂ ವೇಗವಾಗಿರುತ್ತದೆ. (ಕಣ್ಣು-ಕೈಗಳ ಸಹ ಸಂಬಂಧ, ಗಮನ ಕೇಂದ್ರೀಕರಿಸುವಿಕೆ . . . ). ಸಾಮಾಜಿಕ- ಬಾವನಾತ್ಮಕ ಬೆಳವಣಿಗೆಗಳನ್ನು ನೋಡುವುದು (ನಗುಮುಖ, ಅನುಕರಣೆ ಮುಂತಾದವುಗಳು). ಬಾಷಾ ಕಲಿಕೆಯನ್ನು ಆಲಿಸುವುದು (ಕೂಗುವಿಕೆ, ತೊದಲುನುಡಿ, ವಸ್ತುಗಳ ಹೆಸರನ್ನು ತಕ್ಷಣ ಗುರುತಿಸುವಿಕೆ. ಅವರು ಮೊದಲಿಗೆ ಹೇಳಿದ ಪದಗಳು . . . .). ಮೊದಲ ಹಂತದ ಗುರುತಿಸುವಿಕೆಯಲ್ಲಿ ಪ್ರಮುಖ ಮೈಲುಗಲ್ಲಾಗುತ್ತವೆ. ಮಕ್ಕಳ ವೈದ್ಯರ/ತಜ್ಞರ ಬಳಿ ನಿರಂತರವಾಗಿ ಸಂಪರ್ಕದಿಂದಲೂ ಸುಲಭವಾಗಿ ಗುರುತಿಸಬಹುದು. ಇನ್ನು ಅಂತರಜಾಲ, ಪುಸ್ತಕ ಇತ್ಯಾದಿಗಳಿಂದ ಮಾಹಿತಿಗಳನ್ನು ಸಂಗ್ರಹಿಸುವುದರಿಂದ ಅತ್ಯಂತ ಸರಳ ರೀತಿಯಲ್ಲಿ ಇತರೆ ಮಕ್ಕಳಿಂದ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ವಿಭಾಗಿಸಿ ಗುರುತಿಸಬಹುದು.

ಕೆಲ ಮಕ್ಕಳಲ್ಲಿ ಪ್ರತಿಭೆಯು ನಿಧಾನವಾಗಿ ಅರಳುತ್ತದೆ. ಅವರಲ್ಲಿಯ ವಿಶೇಷಗುಣಗಳು ಹೊರಹೊಮ್ಮಲು ಕೆಲವು ಕಾಲಾವಕಾಶ ಬೇಕಾಗುತ್ತದೆ. ಇಂತಹವನ್ನು ಬೇಗನೆ ಗುರುತಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ನಾನಾ ಕಾರಣಗಳನ್ನು ಹೇಳಬಹುದು (ನಾಚಿಕೆ. . . . ). ಮಕ್ಕಳನ್ನು ಗರುತಿಸಲು ಇರುವ ಏಕೈಕ ರಾಜಮಾರ್ಗವೆಂದರೆ ಹುಟ್ಟಿನಿಂದಲೇ ಮಗುವಿನ ಪ್ರತಿನಡೆಯನ್ನು ಅತ್ಯಂತ ಸೂಕ್ಷ್ಮಸಂವೇದನೆಯಿಂದ ಗಮನಿಸುವುದು. ಇನ್ನೊಂದು ಹಂತ ಹೇಳುವುದಾದರೆ ಅವರ ಆಸಕ್ತಿಗಳು, ವರ್ತನೆಗಳ ಮುಖಾಂತರ ವ್ಯಕ್ತವಾಗುವುದನ್ನು ಕಾಣಬಹುದು. ಮಗುವಿಗೆ ನೈಸರ್ಗಿಕವಾಗಿಯೇ ಹುಟ್ಟುತ್ತಲೇ ಆ ಗುಣಗಳು ಬೆಳೆದು ಬರುತ್ತಿರುವುದನ್ನು ನೋಡಬಹುದು. ಮೇಧಾವಿ ಮಕ್ಕಳು ವಯಸ್ಸಿಗೆ ಮೀರಿದ ಆಸಕ್ತಿ ಹೊಂದಿರುತ್ತಾರೆ. ಉದಾಹರಣೆಗೆ ಪದಗಳನ್ನು ಓದುವ ಹಂತದಲ್ಲಿ ವಾಕ್ಯಗಳನ್ನು ಸರಳವಾಗಿ ಓದುವ-ಬರೆವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ಮಕ್ಕಳನ್ನು ಗುರುತಿಸಿ, ಬೆಳವಣಿಗೆಯನ್ನು ದಾಖಲೆ ರೂಪದಲ್ಲಿಟ್ಟರೆ ಏನೂ ಉಪಯೋಗವಿಲ್ಲ. ಅವರ ಪ್ರತಿಭೆ ಅರಳಲು, ತೃಪ್ತಿಯಾಗುವಂತೆ ಪಾಲನೆ ಮಾಡಬೇಕು.

 

ಮೇಧಾವಿ ಮಕ್ಕಳ ಪೋಷಣೆ

ಮೇಧಾವಿ ಮಕ್ಕಳ ಪಾಲನೆಯು ಅತ್ಯಂತ ಸೂಕ್ಷ್ಮವಾದ ಗಮನ ಮತ್ತು ದಾಖಲೆಯನ್ನು ಬಯಸುತ್ತದೆ. ಅನೇಕ ಪಾಲಕರು ಸ್ವತಃ ತಾವೇ ಮಕ್ಕಳ ಬೆಳವಣಿಗೆಗಳ ಚಟುವಟಿಕೆಗಳನ್ನು ದಿನಚರಿ, ಆತ್ಮ ಚರಿತ್ರೆ, ವಿಡಿಯೋ ಚಿತ್ರೀಕರಣ ಮುಂತಾದವುಗಳಲ್ಲಿ ದಾಖಲಿಸುತ್ತಿದ್ದಾರೆ. ಇದು ಪೋಷಕರಿಗೆ ಮಾತ್ರ ನೆರವಾಗುವುದಿಲ್ಲ, ಬದಲಾಗಿ ಶಾಲೆಯಲ್ಲಿ, ಮಕ್ಕಳ ಕುರಿತು ವೈದ್ಯಕೀಯ ಅಭ್ಯಾಸ ಮಾಡುವವರಿಗೆ, ವಿಶೇಷ ಪ್ರತಿಭೆಗಳ ಕುರಿತು ಸಂಶೋಧನೆ ಮಾಡುವವರಿಗೆ ಹೆಚ್ಚಿನ ಮಾಹಿತಿ ಮತ್ತು ಸಹಾಯ ಒದಗಿಸುತ್ತದೆ. ಈ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವುದು ಮೊದಲನೆ ಸವಾಲು. ಎರಡನೆಯದು ಆ ಮಗುವಿನ ಪೋಷಣೆ ಮಾಡುವುದಾಗಿದೆ. ಪ್ರಸ್ತುತ ಮಕ್ಕಳ ಕಲಿಕೆಗಿರುವ ಪಠ್ಯಕ್ರಮದ ಹಲವು ಕ್ಷೇತ್ರಗಳು ಮೇಧಾವಿ ಮಕ್ಕಳ ಬೆಳವಣಿಗೆಗೆ ಅಡ್ಡಿಪಡಿಸುತ್ತಲಿವೆ ಎಂದೇ ಹೇಳಬಹುದು. ಹಾಗಾಗಿ ಅಂತಹ ಮಕ್ಕಳಿಗೆ ಶಿಕ್ಷಕರು ಮತ್ತು ತಜ್ಞರು ವಿಶೇಷ ಪಠ್ಯವನ್ನು ಅವರ ಮುಂದಿನ ಕಲಿಕೆಗೆ ನೆರವಾಗುವಂತೆ ರೂಪಿಸಬೇಕಿದೆ. ಈ ರೀತಿಯ ಚಟುವಟಿಕೆಗಳನ್ನು ಬಹಳ ಎಚ್ಚರಿಕೆಯಿಂದ ಸಿದ್ಧಪಡಿಸಿದರೆ ಅದು ಆ ತರಹದವರೆಲ್ಲರಿಗೂ ನೆರವಾಗುತ್ತದೆ. ಅದರಿಂದ ಮಗು ತನ್ನ ಸಮಸ್ಯೆಯನ್ನು ತಾನೆ ಪರಿಹಾರ ಕೊಂಡುಕೊಳ್ಳಲು ಬೆಂಬಲಸಿಗುತ್ತದೆ.

ಮೇಧಾವಿ ಮಕ್ಕಳು ಹೆಚ್ಚು ಹೆಚ್ಚು ಜ್ಞಾನದ ಹಸಿವನ್ನು ಹೊಂದಿರುತ್ತಾರೆ. ಹಾಗಾಗಿ ಶಾಲೆಯ ಹೊರಗೂ ಕಲಿಕೆಯ ಮುಂದಿನ ಹಂತಗಳ ಬಗ್ಗೆ ಪಾಲಕರು ಕೈ ಜೋಡಿಸಬೇಕು (ವಸ್ತುಗಳು, ಪ್ರಯೋಗಾಲಯಗಳು. ಅವರಲ್ಲಿ ಉದಯಿಸುವ ಯೋಚನೆಗಳು, ಅವರು ಮಾಡುವ ಚರ್ಚೆಗಳು ಇತ್ಯಾದಿ). ಪಾಲಕರು ಸಾಧ್ಯವಾದಷ್ಟು ಹೆಚ್ಚಿನ ಸಮಯ ಆ ಮಗುವಿನ ಜೊತೆಯಲ್ಲಿ ಕಳೆಯಬೇಕು. ಮಕ್ಕಳ ವೈಯಕ್ತಿಕ ಕೆಲಸದಲ್ಲಿ, ಯೋಜನೆಗಳನ್ನು ರೂಪಿಸುವಾಗ, ಮನೆಯಲ್ಲಿ ಆಸಕ್ತಿಯಿಂದ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿದಾಗ ಪೋಷಕರು ಸಾಥ್ ನೀಡಬೇಕು. ತಜ್ಞರು ಅಥವಾ ಆ ಕ್ಷೇತ್ರದ ಹಿರಿಯರನ್ನು ಸಂಪರ್ಕಿಸಿ ಮಗುವಿನ ಯೋಚನೆ, ಚಟುವಟಿಕೆ, ಆಸಕ್ತಿಗಳನ್ನು ಚಿಕ್ಕ ಟಿಪ್ಪಣಿ ರೂಪದಲ್ಲಿ ಬರೆದುಕೊಳ್ಳಬೇಕು. ನಂತರ ಅದನ್ನು ಮಾರ್ಗದರ್ಶಕರ ಮುಂದಿಡಬಹುದು. ಅದು ಮಗುವನ್ನು ಸರಿಯಾದ ಹಾದಿಯಲ್ಲಿ ರೂಪಿಸಲು/ಸಿದ್ಧಪಡಿಸಲು ತನ್ನದೇ ಆದ ಪಾತ್ರವಹಿಸುತ್ತದೆ. ವೇಗದ ಕಲಿಕೆ ಮಾಡುವ ವಿದ್ಯಾರ್ಥಿಗಳ ವೇತನವನ್ನು ಪಡೆಯಲು ಸಹಾಯಕವಾಗುತ್ತದೆ. ಉದಾಹರಣೆಗೆ ಕಿಶೋರ ವೈಜ್ಞಾನಿಕ ಪ್ರೋತ್ಸಾಹ ಯೋಜನೆ (www.kvpy.org.in/main/ ) ಅಥವಾ ಗಣಿತ-ವಿಜ್ಞಾನದ ಓಲಂಪಿಯಾಡ್ (www.icbse.com/category/olmpiads ). ಮಗು ತನ್ನ ಆಸಕ್ತಿ ರಂಗದಲ್ಲಿ ದೀರ್ಘಕಾಲ ಬೆನ್ನಟ್ಟುವಲ್ಲಿ ಇಂತಹುಗಳು ಆಸರೆಯಾಗುತ್ತವೆ.

ಪೋಷಣೆಯೆಂದರೆ ಕೇವಲ ಗಮನಕೊಡುವುದಲ್ಲ. ಬದಲಾಗಿ ಮಗು ಇನ್ನು ಯಾವ ಕ್ಷೇತ್ರಗಳಲ್ಲಿ ಹಿಂದೆ ಉಳಿದಿದೆ ಎಂಬುದು ಇಲ್ಲಿ ಮಹತ್ವವಾಗುತ್ತದೆ. ಹಲವು ಮಕ್ಕಳು ತಮ್ಮ ಪ್ರತಿಭೆಗೆ ಒಗ್ಗಿಕೊಂಡು ಪ್ರದರ್ಶಿಸಲು ಸದಾ ಸಿದ್ಧರಿರುತ್ತಾರೆ. ಆದರೆ ಕೆಲವು ಮಕ್ಕಳಲ್ಲಿ ಹಿಂಜರಿಕೆ ಮನೋಭಾವವಿರುತ್ತದೆ. ಅಂದರೆ ಅವರಲ್ಲಿ ತಾವು ಪರಿಪೂರ್ಣರಲ್ಲ ಎಂಬ ಭಾವನೆ, ಸಂಕೋಚ, ಅಹಂಕಾರ ಇತ್ಯಾದಿಗಳಿಂದ ಸಹಜವಾಗಿ ಬೆರೆಯವುದಿಲ್ಲ. ಆ ನಿಟ್ಟಿನತ್ತ ಪಾಲಕರು ಆದ್ಯತೆ ನೀಡಬೇಕು. ಮಕ್ಕಳು ತಮ್ಮ ಸಮಸ್ಯೆಗಳನ್ನು ಅರಿತುಕೊಂಡು ಅವಕ್ಕೆ ಅಂಜದೆ ದೃಢವಾಗಿ ಎದುರಿಸಲು ಬೇಕಾದ ಬೆಂಬಲವನ್ನು ನೀಡಬೇಕು.

ವರ್ತನೆಗಳಿಗೆ ಸಂಬಂಧಿಸಿದಂತೆ ಉತ್ತಮ ಮಾರ್ಗದರ್ಶನ ನೀಡಬೇಕು. ಅದಕ್ಕೆ ಹೇಳುವುದಾದರೆ ತರಗತಿಯಲ್ಲಿ ಪ್ರಶ್ನೆ ಕೇಳುವಾಗ ಇತರರಿಗೆ ತೊಂದರೆಯಾಗದಂತೆ ಕೇಳುವ ವಿಧಾನ, ತರಗತಿಯಲ್ಲಿ ಚಟುವಟಿಕೆ ಮಗಿಸಿದ ನಂತರ ಹೇಗೆ ವರ್ತಿಸಬೇಕು ಮತ್ತು ಕಾರ‍್ಯಗಳಲ್ಲಿ ತೊಡಗಿಕೊಳ್ಳಬೇಕು. ಸಮಾನ ವಯಸ್ಕರ ಜೊತೆ ಸಂವಹನ ಮಾಡುವಾಗ ಅವರನ್ನು ಕೀಳಾಗಿ/ತುಚ್ಛ ಭಾವನೆಯಿಂದ ಕಾಣದಿರುವಿಕೆ ಇತ್ಯಾದಿ. ಸಾಮಾಜಿಕ ವರ್ತನೆಗೆ ಕೆಲಸಾರಿ ಈ ಮಕ್ಕಳು ತಕ್ಷಣ ಹೊಂದಿಕೊಳ್ಳುವುದಿಲ್ಲ. ಅದಕ್ಕೆ ಪೋಷಕರು ಅವಕಾಶ ನೀಡುತ್ತಾ ಪ್ರೋತ್ಸಾಯಿಸಬೇಕು.

 

ಎಚ್ಚರಿಕೆಗಳೂ ಇವೆ. . .

ಒಟ್ಟಾರೆ ಸಾರಾಂಶ ರೂಪದಲ್ಲಿ ಹೇಳುವುದಾದರೆ ಪ್ರತಿಭಾನ್ವಿತ ಮಕ್ಕಳ ಪೋಷಣೆ ಮಾಡಬೇಕಾದರೆ ಮುಖ್ಯವಾಗಿ ಮುರು ಅಂಶಗಳನ್ನು ಪಾಲಿಸಬೇಕು. ಮಗುವಿನ ಆಸಕ್ತಿ ಹಾಗೂ ಕೌಶಲಗಳ ಬಗ್ಗೆ ಸೂಕ್ಷ್ಮಸಂವೇದನೆ ಹೊಂದಬೇಕು. ಮಗುವಿನ ಉನ್ನತ ಜ್ಞಾನವನ್ನು ಸರಿಯಾಗಿ ಪೋಷಿಸುತ್ತಾ ಮುನ್ನೆಡೆಸಬೇಕು. ಮಗುವಿನ ಅಸಾಧಾರಣ ಬೆಳವಣಿಗೆಯನ್ನು ಗುರುತಿಸಿ, ನಿರ್ಧಿಷ್ಟ ಗುರಿಸಾಧನೆಯತ್ತ ಮುಂದುವರೆಯಲು ಸಂಪೂರ್ಣ ಬೆಂಬಲ ನೀಡಬೇಕು. ಹಾಗಾಗಿ ಪೋಷಕರು ಸೂಕ್ಷ್ಮ ಸ್ವಭಾವದಿಂದ ಮಕ್ಕಳ ಬೇಡಿಕೆಗಳನ್ನು ಸ್ವೀಕರಿಸಬೇಕು.

ಮಕ್ಕಳನ್ನು ಯಾವುದೇ ಚೌಕಟ್ಟಿನಡಿಯಲ್ಲಿ ಬಂಧಿಸಿಡುವುದು ತರವಲ್ಲ. ಅವರ ಮೇಲೆ ಯಾವುದೇ ಒತ್ತಡಹಾಕಿ, ಅವರ ಹಾದಿಯಿಂದ ದೂರಸರಿಸುವುದು ತರವಲ್ಲ. ಪಾಲಕರು ಸಹಜವಾಗಿ ಯಾವುದೇ ತರಹದ ಯೋಚನೆ ಮಾಡದೆ ಮುಂದಿನ ತರಗತಿಗಳಿಗೆ ಸೇರಿಸುವುದು, ಶಾಲಾ ಶಿಕ್ಷಣದಲ್ಲಿ ಮಗು ಸಹಪಾಠಿಗಳಿಗಿಂತ ಹೆಚ್ಚು ಮುಂದಿರಬೇಕು, ಮಗುವನ್ನು ಪ್ರದರ್ಶನ ಗೊಂಬೆತರಹ ಮಾಡುವುದು ಸರಿಯಾದ ಕ್ರಮಗಳಲ್ಲ. ಇದರಿಂದ ಮಗುವಿನ ಬೆಳವಣಿಗೆ ಕುಂಠಿತವಾಗಬಹುದು.

ಮಗುವಿನ ಅವಶ್ಯಕತೆಗಳಿಗೆ ಆದ್ಯತೆ ನೀಡುತ್ತಾ, ಸಾಮಾನ್ಯ ಮತ್ತು ಒತ್ತಡ ರಹಿತ ಬಾಲ್ಯವನ್ನು ಅನುಭವಿಸುವಂತೆ ಮಾಡಿದರೆ ಮಗುವಿನ ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಕೆಲವು ಸಾರಿ ಮಗು ದೊಡ್ಡದಾದಂತೆ ಬಾಲ್ಯದಲ್ಲಿನ ಬೆಳವಣಿಗೆ ಕ್ಷೀಣಿಸಬಹುದು. ಅದನ್ನು ಹಾಗೆಯೇ ಸ್ವೀಕರುವುದು ಅತ್ಯಂತ ಮುಖ್ಯ ಎಂದು ಮಕ್ಕಳ ಮನಶಾಸ್ತ್ರ ಒತ್ತಿ ಹೇಳುತ್ತದೆ. ಹಾಗಾಗಿ ಪಾಲಕರು ಇಂತಹ ಮಹತ್ವದ ಅಂಶಗಳಬಗ್ಗೆ ಹೆಚ್ಚು ತಿಳಿದುಕೊಂಡರೆ ಪ್ರತಿಭೆ ಎಂಬ ಮಗು ಸುಂದರವಾಗಿ ಅರಳುತ್ತದೆ ಜೊತೆಗೆ ತನ್ನ ಕಂಪನ್ನು ಎಲ್ಲರಿಗೂ ಹರಡುತ್ತದೆ.

ಪ್ರತಿಭಾನ್ವಿತ ಮ್ಕಕಳ ಬೆಳವಣಿಗೆ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಬೆಂಗಳೂರಿನ ರಾಷ್ಟ್ರೀಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರತಿಭಾನ್ವಿತ ಮಕ್ಕಳ ಶಿಕ್ಷಣ ವಿಭಾಗದವರನ್ನು (IS) ಸಂಪರ್ಕಿಸಿ ಪಡೆಯಬಹುದು.

 

 

ಪರಮೇಶ್ವರಯ್ಯ ಸೊಪ್ಪಿಮಠ